
ಈ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್‌ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣ್ ಕುಮಾರ್, ಕಳೆದ ಮೂರು ತಿಂಗಳಿನಿಂದ ಭಾರತೀಯ ರಿಸರ್ವ್ ಬ್ಯಾಂಕ್ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ (DEAF) ಅಡಿಯಲ್ಲಿ ಹಕ್ಕುದಾರರಿಲ್ಲದ ಠೇವಣಿಗಳನ್ನು ಅವುಗಳ ನಿಜವಾದ ಮಾಲೀಕರೊಂದಿಗೆ ಮತ್ತೆ ಸಂಪರ್ಕಿಸಲು ರಾಜ್ಯಾದ್ಯಂತ ವಿಶೇಷ ಅಭಿಯಾನವನ್ನು ಜಾರಿಗೊಳಸಿದೆ ಎಂದು ಹೇಳಿದರು.
ಡಿಸೆಂಬರ್ 31 ರವರೆಗೆ ಈ ಅಭಿಯಾನ ಮುಂದುವರಿಯುತ್ತದೆ. ಆದರೂ ಠೇವಣಿದಾರರು ಗಡುವಿನ ನಂತರವೂ ತಮ್ಮ ಹಣವನ್ನು ಪಡೆಯಲು ಬ್ಯಾಂಕುಗಳನ್ನು ಸಂಪರ್ಕಿಸಬಹುದು.
ಅಂತಹ ಖಾತೆಗಳಲ್ಲಿ ಸುಮಾರು ಶೇಕಡಾ 80ರಷ್ಟು ಖಾತೆಗಳು 10,000 ರೂಪಾಯಿಗಿಂತ ಕಡಿಮೆ ಬಾಕಿಗಳನ್ನು ಹೊಂದಿವೆ ಎಂದರು. ಅವುಗಳಲ್ಲಿ ಹಲವು ದಶಕಗಳಷ್ಟು ಹಳೆಯವು. ನವೀಕರಿಸಿದ ಮೊಬೈಲ್ ಸಂಖ್ಯೆಗಳು ಅಥವಾ ಕೆವೈಸಿ ವಿವರಗಳಿಲ್ಲ, ಹಲವಾರು ಸಂದರ್ಭಗಳಲ್ಲಿ, ಮೂಲ ಖಾತೆದಾರರು ತೀರಿಹೋಗಿದ್ದಾರೆ. ಮೊಬೈಲ್ ಸಂಖ್ಯೆಗಳು ಮತ್ತು ಗ್ರಾಹಕರ ವಿವರಗಳನ್ನು ನವೀಕರಿಸುವುದನ್ನು ಅಭಿಯಾನದ ಮೊದಲ ಹಂತವಾಗಿ ಮಾಡಲಾಗುತ್ತಿದೆ.
ಹಕ್ಕುದಾರರಿಲ್ಲದ ಠೇವಣಿಗಳಲ್ಲಿ ಉಳಿತಾಯ, ಸ್ಥಿರ ಠೇವಣಿ ಮತ್ತು ಚಾಲ್ತಿ ಖಾತೆಗಳಲ್ಲಿನ ಮೊತ್ತಗಳು ಸೇರಿವೆ. ಗ್ರಾಹಕರು UDGAM ಪೋರ್ಟಲ್ ಮೂಲಕ ಕ್ಲೈಮ್ ಮಾಡದ ಠೇವಣಿಗಳನ್ನು ಪರಿಶೀಲಿಸಬಹುದು.
ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕಿ ಕವಿತಾ ಶೆಟ್ಟಿ, ಜಿಲ್ಲೆಯಲ್ಲಿ ಸುಮಾರು ಆರು ಲಕ್ಷ ಬ್ಯಾಂಕ್ ಖಾತೆಗಳಲ್ಲಿ ಸುಮಾರು 140 ಕೋಟಿ ರೂಪಾಯಿ ಕ್ಲೈಮ್ ಆಗದೆ ಉಳಿದಿವೆ. ಇಲ್ಲಿಯವರೆಗೆ, DEAF ಯೋಜನೆಯಡಿ 830 ಖಾತೆಗಳ ಠೇವಣಿದಾರರಿಗೆ 20 ಕೋಟಿ ರೂಪಾಯಿ ಹಿಂತಿರುಗಿಸಲಾಗಿದೆ ಎಂದರು.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಲವಾದ ಜಾಗೃತಿ ಅಭಿಯಾನದ ಅಗತ್ಯವಿದೆ ಎಂದರು. ಬ್ಯಾಂಕುಗಳು ಕರಪತ್ರಗಳು ಮತ್ತು ನೇರ ಸಂಪರ್ಕದ ಮೂಲಕ ಗ್ರಾಹಕರಿಗೆ ಮುಂಚಿತವಾಗಿ ತಿಳಿಸುವಂತೆ ಒತ್ತಾಯಿಸಿದರು.
ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿನ ವಿಳಂಬದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ(PMJDY), ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ( PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ಮತ್ತು ಅಟಲ್ ಪಿಂಚಣಿ ಯೋಜನೆ( APY)ಯಂತಹ ಪ್ರಮುಖ ಯೋಜನೆಗಳ ವಿತರಣೆಯನ್ನು ಬಲಪಡಿಸಲು ಸ್ಪಷ್ಟವಾದ ಕ್ರಿಯಾ ಯೋಜನೆ ಬೇಕು ಎಂದು ಒತ್ತಾಯಿಸಿದರು.
