ಶಿವಮೊಗ್ಗ : ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠದ ೩೫ ನೇ ವಾರ್ಷಿಕೋತ್ಸವ ಸಮಾ ರಂಭವನ್ನು ಅತ್ಯಂತ ವಿಭಿನ್ನ, ವಿಶೇಷವಾಗಿ ಆಚರಿಸಲಾಗುವುದಿಲ್ಲ ಎಂದು ಮಂಜುನಾಥ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮೊದಲ ಬಾರಿಗೆ ದಾಸವರೇಣ್ಯ ಪುರಂದದಾಸರ ಕೀರ್ತನೋತ್ಸವ ಸಮಾರಂಭವನ್ನು ಮಾಜಿ ಸಚಿವ ಆರಗಜ್ಞಾನೇಂದ್ರ ಅವರ ಹುಟ್ಟೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ನ ೪ ರ ಬೆಳಗ್ಗೆ ೧೦ರಿಂದ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿರುವ ಸಹಕಾರ ಸಂಘ ಸಭಾ ಭವನದಲ್ಲಿ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ೭೨ನೇ ಜಗದ್ಗುರು ನಿರ್ಮಲಾ ನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಹಾಗೂ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಜರುಗಲಿದ್ದು, ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿ ಸಲಿದ್ದಾರೆ.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನ.೫ರ ಬೆಳಗ್ಗೆ ೧೦ ಗಂಟೆಗೆ ಮಠದ ೩೫ ನೇ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯುವುದು.
ನವೆಂಬರ್ ೫ರಂದು ಬೆಳಿಗ್ಗೆ ೭ ಗಂಟೆಗೆ ಶರಾವತಿ ನಗರದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಹೋಮ – ಹವನ ಮತ್ತು ವಿಶೇಷ ಪೂಜಾ ಕೈಂಕರ್ಯ ಗಳನ್ನು ನಡೆಸಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಪುರಂದಾಸರ ಕುರಿತು ವಿವಿಧ ಸ್ಪರ್ಧೆಗಳ ಆಯೋಜನೆ:
೩೫ನೇ ವಾರ್ಷಿಕೋತ್ಸವ ಪ್ರಯುಕ್ತ ಮೊದಲ ಬಾರಿಗೆ ಶ್ರೀಮಠದಿಂದ ಕೀರ್ತನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ದಾಸವರೇಣ್ಯ ಪುರಂದರ ದಾಸರ ಕೀರ್ತನೆಗಳ ಗಾಯನ ಸ್ಪರ್ಧೆ, ಪುರಂದರ ದಾಸರ ಕೊಡುಗೆ ಕುರಿತು ಭಾಷಣ ಸ್ಪರ್ಧೆಯನ್ನು ಈಗಾಗಲೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಿನ ಹಂತದಲ್ಲಿ ನಡೆಸಲಾಗಿದ್ದು ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಆಕರ್ಷಕ ಬಹುಮಾನಗಳನ್ನು ಪೂಜ್ಯರಿಂದ ನೀಡಿ ಗೌರವಿಸಲಾಗಿರುತ್ತದೆ.
ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಗಳಲ್ಲಿ ತಾಲ್ಲೂಕು ಹಂತದಲ್ಲಿ ವಿಜೇತರಾದ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಇಂದು ನಡೆಯುವ ಜಿಲ್ಲಾ ಹಂತದ ಸ್ಪರ್ಧೆಗಳು ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು.
ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ನ. ೪ರಂದು ನಡೆಯಲಿರುವ ವಿಶೇಷ, ವಿಭಿನ್ನವಾದ ದಾಸವರೇಣ್ಯ ಪುರಂದರ ದಾಸರ ಕೀರ್ತನೋತ್ಸವ ಸಮಾರಂಭದಲ್ಲಿ ನಾಡಿನ ಖ್ಯಾತ ಗಾಯಕರು ಆಗಮಿಸಿ ವಿವಿಧ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮೊದಲ ಅವಧಿಯಲ್ಲಿ: ವಿದ್ವಾನ್ ಪಣೀಂದ್ರ ಬೆಂಗಳೂರು ಮತ್ತು ಸಂಗಡಿಗರಿಂದ ಹಾಡುಗಾರಿಕೆಯನ್ನು ನಡೆಸಿಕೊಡಲಿದ್ದಾರೆ.
೨ನೇ ಅವಧಿ : ವಿದ್ವಾನ್ ಹೊಸಳ್ಳಿ.ಕೆ.ವೆಂಕಟರಾಂ,ವಿದ್ವಾನ್ ಹೊಸಳ್ಳಿ ಕೆ. ಸುಬ್ಬರಾವ್, ವಿದ್ವಾನ್ ಹೊಸಳ್ಳಿ ವಿ.ರಘುರಾಂ ಮತ್ತು ಸಂಗಡಿಗರಿಂದ ಪಿಟೀಲು ವಾದನ ನಡೆಸಿಕೊಡುವರು.
೩ನೇ ಅವಧಿ: ವಿದ್ವಾನ್ ಶೃಂಗೇರಿ ನಾಗರಾಜ್ ರವರ ಶಿಷ್ಯ ವೃಂದದವರಿಂದ ಮತ್ತು ಆರಗ ಗ್ರಾಮದ ಭಜನಾ ಮಂಡಳಿಯವರಿಂದ ಹಾಡುಗಾರಿಕೆ.
೪ನೇ ಅವಧಿ :ವಿದ್ವಾನ್ ಹುಮಾಯುನ್ ಹರ್ಲಾಪುರ್, ವಿದ್ವಾನ್ ನವಶಾದ್ ಹರ್ಲಾಪುರ್, ವಿದ್ವಾನ್ ನಿಶಾದ್ ಹರ್ಲಾಪುರ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಗಾಯನ.
೫ನೇ ಅವಧಿ : ರಾಷ್ಟ್ರಪತಿ ಪ್ರಶಸ್ತಿ ವಿಜೇತ ವಿದ್ವಾನ್ ಮಾರುತಿ ಪ್ರಸಾದ್ ಬೆಂಗಳೂರು ಮತ್ತು ಸಂಗಡಿಗರಿಂದ ಹಾಡುಗಾರಿಕೆ.
೬ನೇ ಅವಧಿ: ಪೂಜ್ಯ ಶ್ರೀ ಶ್ರೀ ಸಾಯಿ ಕೀರ್ತಿನಾಥ ಸ್ವಾಮೀಜಿ ಹಾಗೂ ವಿದ್ವಾನ್ ಮಾರುತಿ ಪ್ರಸಾದ್ ಅವರಿಂದ ಹಾರ್ಮೋನಿಯಂ, ಕೀಬೋರ್ಡ್,ಜುಗಲ್ ಬಂದಿ ಕಾರ್ಯಕ್ರಮ ನಡೆಯುವುದು.
ಖ್ಯಾತ ಸಂಗೀತಗಾರರಿಂದ ಸಾಮೂಹಿಕ ಗಾಯನ ಹಾಗೂ ಸತ್ಸಂಗ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು, ಶ್ರೀಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕಾಗಿ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.
