: ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.
ಪ್ರಕೃತಿಯು ಚೇತನ ವಾದದ್ದು ಅದರಲ್ಲಿ ಜೀವನವಿದೆ.ಸೌಂದರ್ಯ ಸಮೃದ್ಧತೆ ಇದೆ.ಫಲವಿದೆ ಹೀಗಾಗಿ ಪ್ರಕೃತಿಯ ಸೌಂದರ್ಯವನ್ನು ಹೆಣ್ಣಿಗೆ ಹೋಲಿಸಲಾಗುತ್ತದೆ. ಹೆಣ್ಣು ಗರ್ಭಧರಿಸಿ, ಹೆತ್ತು, ಹೊತ್ತು,ಮಗುವಿನ ಪಾಲನೆ-ಪೋಷಣೆ ಮಾಡಿದರೆ,ಭೂಮಿ ತಾಯಿ ತನ್ನಲ್ಲಿ ಬೆಳೆಬೆಳೆದು, ರೈತನಿಗೆ ನೀಡಿ ಜನತೆಯ ಹೊಟ್ಟೆ ತುಂಬಿಸುತ್ತಾಳೆ. ಹೀಗೆ ಹೆಣ್ಣು ಮತ್ತು ಭೂಮಿ ಎರಡರಲ್ಲಿಯೂ ಹೋರುವ – ಹೇರುವ ಸಮೃದ್ಧತೆಯ ಗುಣಗಳನ್ನು, ಪಾಲನೆ ಮಮಕಾರ ಗುಣಗಳನ್ನು ಕಂಡಿರುವ ಒಳ್ಳೆಯ ಮಕ್ಕಳು ಒಂದರೊಂದಿಗೆ ಇನ್ನೊಂದನ್ನು ನವೀಕರಿಸಲು ಯತ್ನಿಸುತ್ತಾರೆ.

ಹೆಣ್ಣಿನಂತೆ ಭೂಮಿಯ ಜೀವನ ಕ್ರಿಯೆಯಲ್ಲಿಯೂ ಆಚರಣೆಗಳನ್ನು ಮಾಡಲು ಹಂಬಲಿಸುತ್ತಾರೆ.
ಸೀಗೆ ಹುಣ್ಣಿಮೆಯ ಹೊತ್ತಿಗೆ ಭೂಮಿ ಮುಂಗಾರು ಫಸಲಿನಿಂದಲೂ ಎಳ್ಳಮವಾಸ್ಯೆಯ ಹೊತ್ತಿಗೆ ಹಿಂಗಾರಿನ ಫಸಲಿನಿಂದಲೂ ಕಾಳು ಕಟ್ಟಿಕೊಂಡು ನಿಂತಿರುತ್ತವೆ.ಗರ್ಭಿಣಿ ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಮುಂದೆ ಮಗುವನ್ನು ಹೇರುವ,ಮನೆ ತುಂಬುವ ನಿರೀಕ್ಷೆಯಲ್ಲಿರುವಂತೆ ಇಲ್ಲಿ ಭೂಮಿ ಬೆಳೆಗಳನ್ನು ಹೊತ್ತು ಮಕ್ಕಳಿಗೆ ಫಸಲು ಕೊಟ್ಟು ಅವನ ಕಣಜ ತುಂಬುವ ಕಾತರದಲ್ಲಿರುತ್ತಾಳೆ.ಹೀಗಾಗಿ ಗರ್ಭಿಣಿ ಹೆಂಗಸನ್ನು,ಭೂತಾಯಿಯನ್ನು ಒಂದೇ ದೃಷ್ಟಿಕೋನದಿಂದ ನೋಡ ಬಯಸುವ ಮಣ್ಣಿನ ಮಕ್ಕಳು ಗರ್ಭಿಣಿಗೆ ಸೀಮಂತ ಕಾರ್ಯ ಮಾಡಿದಂತೆ,ಭೂತಾಯಿಗೂ ಸೀಮಂತಮಾಡಿ ಸಂಭ್ರಮಿಸುತ್ತಾರೆ. ಗರ್ಭಿಣಿ ಹೆಣ್ಣಿನಲ್ಲಿ ಹೇಗೆ ಬಯಕೆಗಳು ಇರುತ್ತವೆಯೋ ಹಾಗೆಯೇ ಭೂಮಿ ತಾಯಿಗೂ ಬಯಕೆಗಳಿರುತ್ತವೆ ಎಂಬುದು ಅವರ ಗಟ್ಟಿಯಾದ ನಂಬಿಕೆ.ಅವರ ದೃಷ್ಟಿಯಲ್ಲಿ ಬಸಿರು ಹೆಂಗಸು,ಕಾಳುಕಟ್ಟಲು ಸಿದ್ಧವಾಗಿನಿಂತ ಭೂಮಿ ಎರಡೂ ಒಂದೆ.
ಸೀಗೆ ಹುಣ್ಣಿಮೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸುವರು.ಸೀಗೆ ಹುಣ್ಣಿಮೆಗೆ ಗ್ರಾಮೀಣ ಪ್ರದೇಶದಲ್ಲಿ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ.ಐದು ಬಗೆಯ ಆಹಾರವನ್ನು ತಯಾರಿಸಿಕೊಂಡು ರೈತರು ಹೊಲದಲ್ಲಿ ಚರಗ ರೂಪದಲ್ಲಿ ಚಲ್ಲಿ ಉತ್ತಮ ಬೆಳೆ ಬರಲಿ ಎಂದು ಭೂಮಿಗೆ ನೈವೇದ್ಯ ಹಿಡಿಯುವರು, ಅದರಂತೆ ಉತ್ತರ ಕರ್ನಾಟಕದ,ಮಧ್ಯ ಕರ್ನಾಟಕ ಮತ್ತು ಮಲೆನಾಡಿನ ಭಾಗ ಹೀಗೆ ಎಲ್ಲಾ ಕಡೆಯಲ್ಲೂ ಸಡಗರ-ಸಂಭ್ರಮದಿಂದ ಆಚರಿಸುವರು.
ಭೂಮಿ ತಾಯಿ ಮಡಿಲು ಹಸಿರಿನಿಂದ ಕಂಗೊಳಿಸಿದಾಗಲೇ ಅದರಲ್ಲಿ ಸಕಲ ಜೀವರಾಶಿಗಳು ಕಣ್ಣರಳಿಸಿ ಬದುಕಲು ಸಾಧ್ಯ,ಹಸಿರು ಇಲ್ಲದೆ ಹೋದರೆ ಈ ಜಗತ್ತೆ ಬೆಂಗಾಡು,ಬದುಕೇ ಶೂನ್ಯ, ಅದಕ್ಕೆ ನಿಸರ್ಗದ ಮಹತ್ವ ಸಾರುವ ಸೀಗೆ ಹುಣ್ಣಿಮೆಯಂಥ ಪ್ರಕೃತಿ ಆಧಾರಿತ ಆಚರಣೆಗಳು ನಮಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ಅರ್ಥವಾಗಬೇಕಿದೆ. ಅವುಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಹೇಳುವ ಅನಿವಾರ್ಯತೆಯೂ ಇದೆ.
ನಾನಾ ಖಾದ್ಯಗಳಿಂದ ಭೂಮಿ ತಾಯಿಗೆ ನೈವೇದ್ಯ:
ಮನೆಯಲ್ಲಿ ಹೋಳಿಗೆ, ಕಡುಬು ಪಾಯಿಸ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ,ಖಡಕ್ ರೊಟ್ಟಿ, ಚಪಾತಿ ನಾನಾ ರೀತಿಯ ಪಲ್ಯ ಕೆನೆಮೊಸರು ಬೆಣ್ಣೆ-ತುಪ್ಪಾ ಬಗೆ ಬಗೆಯ ಚಟ್ನಿಗಳು ಹೀಗೆ ಭೂರಿ ಭೋಜನವೇ ತಯಾರಿಯಾಗಿರುತ್ತದೆ. ಇವೆಲ್ಲವನ್ನು ಕಟ್ಟಿಕೊಂಡು,ಸಿಂಗರಿಸಿದ ಎತ್ತುಗಳೊಂದಿಗೆ ಚಕ್ಕಡಿ ಹೂಡಿಕೊಂಡು ಹೊಲಕ್ಕೆ,ತೋಟ,ಗದ್ದೆಗೆ ಹೋಗುವಾಗಿನ ಖುಷಿ ಇನ್ನೆಲ್ಲಿಯೂ ಸಿಗದು.ಈ ವೇಳೆ ಹಿರಿಯರು, ಮಕ್ಕಳಾದಿಯಾಗಿ ಎಲ್ಲರೂ ಸಾಂಪ್ರದಾಯಿಕ ಬಣ್ಣ ಬಣ್ಣದ ಬಟ್ಟೆ ತೊಟ್ಟು ಸಂಭ್ರಮಿಸುವರು.ಮಹಿಳೆಯರು ರೇಷ್ಮೆ ಸೀರೆ ವಿವಿಧ ಆಭರಣಗಳು ಸೇರಿದಂತೆ ಸರ್ವಾಲಂಕಾರ ಭೂಷಿತೆಯಾಗಿ ಹೊಲಕ್ಕೆ ಹೋಗುತ್ತಾರೆ.ಅಲ್ಲಿಗೆ ಹೋದ ಮೇಲೆ ಬಾಳೆ ಕಂದು, ತಳಿರು -ತೋರಣ,ವಿವಿಧ ಹೂವಿನ ಅಲಂಕಾರಗಳೊಂದಿಗೆ ಭೂದೇವಿಯನ್ನು ಅಲಂಕಾರ ಗೊಳಿಸಿ,ಪೂಜೆ ಮಾಡುವುದು ಮುಖ್ಯ ಘಟ್ಟ,ಸಾಂಪ್ರದಾಯಿಕವಾಗಿ ಭಕ್ತಿ-ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ಮನೆಯಿಂದ ತಂದ ನಾನಾ ಖಾದ್ಯಗಳನ್ನು ನೈವೇದ್ಯ ಮಾಡುತ್ತಾ
ಮುಂಗಾರಿನ ಫಸಲು ರೈತನ ಮನೆ ತುಂಬುವ ಕಾಲವಿದು. ಜೋಳ, ಮೆಕ್ಕೆಜೋಳ,ಸಜ್ಜೆ, ಹೆಸರು,ಸೂರ್ಯಕಾಂತಿ, ರಾಗಿ ಹೀಗೆ ಅನೇಕ ಧಾನ್ಯಗಳ ರಾಶಿ ಮಾಡುವ ಕಾಲ.ರಾಶಿಯ ಸಂಭ್ರಮದೊಂದಿಗೆ ಚಳಿಗಾಲವನ್ನು ಸ್ವಾಗತಿಸುವ ಸಂಕ್ರಮಣದ ಕಾಲವು ಹೌದು, ಇದಕ್ಕೆ ಸೀಗಿ ಹುಣ್ಣಿಮೆಯ ಬೆಳದಿಂಗಳಿನ ಮೆರಗು ಸೇರಿಕೊಂಡಾಗ ಅದು ನೀಡುವ ಸಂತೋಷವನ್ನು ಭೂ ತಾಯಿಯ ಮಡಿಲಲ್ಲಿಯೇ ಸವಿಯಬೇಕು. ನಂತರ ನೈವೇದ್ಯಗಳನ್ನು ಹೊಲದ ಎಲ್ಲಾ ದಿಕ್ಕುಗಳಲ್ಲಿಯೂ ಚಲ್ಲುತ್ತಾರೆ.ಅದಕ್ಕೆ ಚರಗ ಚೆಲ್ಲುವುದು ಎಂಬ ಹೆಸರು.ಇದಾದ ಮೇಲೆ ಎಲ್ಲರೂ ಸೇರಿ ಒಟ್ಟಾಗಿ ಹಬ್ಬದೂಟವನ್ನು ಮಾಡಿ.ಇಡೀದಿನ ಪ್ರಕೃತಿಯ ಮಡಿಲಲ್ಲಿ ನಲಿದು ಸಂಜೆ ಮನೆಗೆ ಮರಳುತ್ತಾರೆ.

ಭೂಮಿ ಹುಣ್ಣಿಮೆಯ ವಿಶೇಷತೆ:
ಪ್ರಕೃತಿಯ ಆರಾಧನೆ ಹಾಗೂ ಸಂರಕ್ಷಣೆ ಸೀಗೆ ಹುಣ್ಣಿಮೆಯ ಆಚರಣೆಯ ಮೂಲ ಉದ್ದೇಶ. ಇದಕ್ಕೆ ಸಾಂಕೇತಿಕವಾಗಿ ಒಂದಿಷ್ಟು ಸಂಪ್ರದಾಯಗಳು, ಆಚರಣೆಗಳು ಜತೆಯಾಗುತ್ತವೆ.ರಾಶಿ ಮಾಡಿ ಧಾನ್ಯಗಳನ್ನು ಮನೆಗೆ ತುಂಬಿಕೊಳ್ಳುವ ತವಕದಲ್ಲಿರುವ ರೈತ ಕುಟುಂಬದವರು ಈ ವೇಳೆ ಸಡಗರದಿಂದಲೇ ಭೂದೇವಿಯ ಆರಾಧನೆಗೆ ಮುಂದಾಗುತ್ತಾರೆ.
ಜಾಗತಿಕ ತಾಪಮಾನ ಎದುರಿಸುತ್ತಿರುವ
ಇಂದಿನ ದಿನಗಳಲ್ಲಿ, ಹಿಂದೆಂದಿಗಿಂತಲೂ ಈಗ ನಮ್ಮ ಸಂಸ್ಕೃತಿ, ಪರಂಪರೆ, ಹಬ್ಬಹರಿದಿನಗಳ ಕುರಿತು ಜಾಗೃತಿ ಹಾಗೂ ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಅಗತ್ಯವಿದೆ. ಏಕೆಂದರೆ ಅವೆಲ್ಲವೂ ಪ್ರಕೃತಿಯನ್ನೇ ಆರಾಧಿಸಿ, ಅದನ್ನು ಸಂರಕ್ಷಿಸುವ ಉದ್ದೇಶಗಳನ್ನೇ ಹೊಂದಿವೆ. ಭೂಮಿ ಬೆಂಡಾಗುವ ಮೊದಲು ಈಗಿನ ಪೀಳಿಗೆಗೆ ಪ್ರಕೃತಿ ರಕ್ಷಣೆ ಬಗ್ಗೆ ತಿಳಿಹೇಳಬೇಕಿದೆ.
ಹಸಿರು ಸೀರೆ ಎಂಬುದು ಜೀವ ಜಾಗದ ತೊಟ್ಟಿಲು, ಅನ್ನ-ನೀರು, ಗಾಳಿಯ ಮೂಲವೇ ಈ ಪ್ರಕೃತಿ. ಅದು ಜೀವಕ್ಕೆ ಜೀವ ತುಂಬುತ್ತದೆ. ಮನಸ್ಸಿಗೆ ಸಂತೋಷ ಕೊಡುತ್ತದೆ. ಹಸಿರು ಸಂಪತ್ತು ತುಂಬಿ ತುಳುಕುತ್ತಿದ್ದರೆ, ಯಾರು ಬಡವರಾಗಿ ಉಳಿಯುವುದಿಲ್ಲ. ನಿಸರ್ಗದಲ್ಲಿಯೇ ಸಂಪತ್ತು, ಸಿರಿ, ಉಸಿರನ್ನು ಕಂಡಾಗ ಜಗತ್ತಿಗೇ ಶ್ರೀಮಂತಿಕೆ. ಸೀಗೆ ಹುಣ್ಣಿಮೆ ಕೂಡ ಈ ಭೂ ಸಂಪತ್ತು, ಜಲ ಸಂಪತ್ತು, ಧಾನ್ಯ ಸಂಪತ್ತು ಹಾಗೂ ಕೃತಜ್ಞತಾ ಭಾವ ಸಂಪತ್ತಿನ ಮಹತ್ವ ಹೇಳುವ ಉದ್ದೇಶದ ಅಪೂರ್ವ ಆಚರಣೆ. ಇದರ ಜೊತೆ ನಿಸರ್ಗ ರಕ್ಷಣೆ ಬಗೆಗಿನ ಚಿಂತನೆಗೆ ಹಚ್ಚುವ ಸುಸಮಯ, ಈ ವೇಳೆ ಅಂಥ ದ್ದೊಂದು ಸಂರಕ್ಷಣೆಯ ಮಹಾಕಾರ್ಯ ಜಗತ್ತಿನಾದ್ಯಂತ ಅಕ್ಷರಶಃ ಕಾರ್ಯರೂಪಕ್ಕೆ ಬರಬೇಕಿದೆ. ಆಗಲೇ ಆಚರಣೆಗೊಂದು ಅರ್ಥ.
